Tuesday, 3 April 2018

ಅಟಾರ್ನಿ ಜನರಲ್ ಆಫ್‌ ಇಂಡಿಯಾ’ ಹುದ್ದೆ ಎಂದರೇನು?

ಅಟಾರ್ನಿ ಜನರಲ್ ಆಫ್‌ ಇಂಡಿಯಾ’ ಹುದ್ದೆ ಎಂದರೇನು?

ಕೇಂದ್ರ ಸರ್ಕಾರದ ಪ್ರಮುಖ ಕಾನೂನು ಸಲಹೆಗಾರರಿಗೆ ‘ಅಟಾರ್ನಿ ಜನರಲ್ ಆಫ್‌ ಇಂಡಿಯಾ’ ಎನ್ನುತ್ತಾರೆ. ಕೇಂದ್ರದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಇರುವ ಪ್ರಮುಖ ವಿಚಾರಣೆಯಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸುವಲ್ಲಿ ಇವರದ್ದು ಪ್ರಮುಖ ಪಾತ್ರ. ಕೇಂದ್ರದ ವಿರುದ್ಧ ದೇಶದ ಯಾವುದೇ ಹೈಕೋರ್ಟ್‌ಗಳಲ್ಲಿ ನಡೆಯುವ ಪ್ರಕರಣಗಳಲ್ಲೂ ಇವರು ಕೇಂದ್ರದ ಪರವಾಗಿ ವಾದಿಸುವ ಅಧಿಕಾರ ಹೊಂದಿರುತ್ತಾರೆ. ಇವರ ನೇಮಕ ಹಾಗೂ ಅರ್ಹತೆಗಳ ಕುರಿತು ಸಂವಿಧಾನದ 76ನೇ ವಿಧಿಯು ವಿವರಿಸುತ್ತದೆ. ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಲು ಅರ್ಹತೆ ಇರುವ ಭಾರತದ ಪ್ರಜೆಯನ್ನು ಅಟಾರ್ನಿ ಜನರಲ್‌ ಆಗಿ ರಾಷ್ಟ್ರಪತಿಗಳು ನೇಮಿಸುತ್ತಾರೆ.

ರಾಷ್ಟ್ರಪತಿಗಳು ಇಚ್ಛಿಸುವವರೆಗೆ ಇವರು ತಮ್ಮ ಕರ್ತವ್ಯವನ್ನು ಮುಂದುವರಿಸಬಹುದು. ಸಂಸತ್ತಿನ ಉಭಯ ಸದನಗಳಲ್ಲಿ ಭಾಗವಹಿಸುವ ಅಧಿಕಾರ ಇವರಿಗೆ ಇದೆ (ಆದರೆ ಮತದಾನದ ಹಕ್ಕು ಇಲ್ಲ). ಇವರ ಸಂಬಳವನ್ನು ಕಾಲಕಾಲಕ್ಕೆ ಬದಲಾಯಿಸುವ ಅಧಿಕಾರ ಕೂಡ ರಾಷ್ಟ್ರಪತಿಗಳಿಗೆ ಇದೆ. ಸಾಮಾನ್ಯವಾಗಿ ಇವರಿಗೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಿಗೆ ನೀಡುವಷ್ಟು ಸಂಬಳವನ್ನು ನೀಡಲಾಗುತ್ತದೆ.

ಯಾವುದಾದರೂ ಕಾರಣಕ್ಕೆ ಇವರು ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಇಚ್ಛಿಸದಿದ್ದಲ್ಲಿ ರಾಷ್ಟ್ರಪತಿಯವರಿಗೆ ರಾಜೀನಾಮೆ ಪತ್ರವನ್ನು ನೀಡಬೇಕಾಗುತ್ತದೆ. ಒಂದು ವೇಳೆ ಇವರು ಕರ್ತವ್ಯ ಸರಿಯಾಗಿ ನಿರ್ವಹಿಸುತ್ತಿಲ್ಲವೆಂದಾದಲ್ಲಿ ಇವರನ್ನು ಕೆಲಸದಿಂದ ವಜಾ ಮಾಡುವ ಅಧಿಕಾರ ರಾಷ್ಟ್ರಪತಿಗಳಿಗೆ ಇದೆ. ಆದರೆ ವಜಾ ಮಾಡುವ ಪ್ರಕ್ರಿಯೆ ಹಾಗೂ ವಜಾ ಮಾಡುವ ಕಾರಣಗಳ ಕುರಿತು ಸಂವಿಧಾನದಲ್ಲಿ ಯಾವುದೇ ಉಲ್ಲೇಖವಿಲ್ಲ.

No comments:

Post a Comment