Friday, 23 March 2018

ಪಿ.ಎಸ್.ಐ (ಪೊಲೀಸ್ ಸಬ್ ಇನ್ಸ್ಪೆಕ್ಟರ್) ಪರೀಕ್ಷೆಯಲ್ಲಿ ಪ್ರಬಂಧ ಬರೆಯುವುದು ಹೇಗೆ? (How to Write PSI Essay Paper?)


ಪಿ.ಎಸ್.ಐ (ಪೊಲೀಸ್ ಸಬ್ ಇನ್ಸ್ಪೆಕ್ಟರ್) ಪರೀಕ್ಷೆಯಲ್ಲಿ ಪ್ರಬಂಧ ಬರೆಯುವುದು ಹೇಗೆ?
(How to Write PSI Essay Paper?)
•─━━━━━═══════════━━━━━─••─━━━━━═══════════━━━━━─•
★ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆ ಸಿದ್ಧತೆ
(PSI Exam preparation)
ರಾಜ್ಯ ಪೊಲೀಸ್ ಇಲಾಖೆ ನಾಗರಿಕ, ಕೆಎಸ್ಆರ್ಪಿ ಮತ್ತು ವೈರ್ಲೆಸ್ ವಿಭಾಗದಲ್ಲಿ ಖಾಲಿ ಸಬ್-ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿರುತ್ತವೆ. ಪರೀಕ್ಷೆಯಲ್ಲಿನ ಪತ್ರಿಕೆ-1ಕ್ಕೆ ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಉತ್ತರಿಸಬಹುದುದಾಗಿದೆ.

ಪ್ರಬಂಧ ಎಂದರೆ 'ಚೆನ್ನಾಗಿ ಕಟ್ಟುವುದು' ಎಂದರ್ಥ. ಪ್ರಸ್ತುತ ಪಿ.ಎಸ್.ಐ. ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಪಿ.ಎಸ್.ಐ. ಪರೀಕ್ಷೆಯಲ್ಲಿ 20 ಅಂಕಗಳಿಗೆ ಪ್ರಬಂಧ ಬರೆಯಬೇಕಿದ್ದು ಒಟ್ಟು 600 ಪದಗಳ ಮಿತಿಯನ್ನು ನಿಗದಿಗೊಳಿಸಲಾಗಿದೆ. ಕೆ.ಎ.ಎಸ್. ಪರೀಕ್ಷೆಗೆ 1000 ಪದಗಳು ಹಾಗೂ ಐ.ಎ.ಎಸ್. ಪರೀಕ್ಷೆಗೆ 1200 ಪದಗಳಲ್ಲಿ ಪ್ರಬಂಧ ಬರೆಯಬೇಕಿರುತ್ತದೆ.

ಪಿ.ಎಸ್.ಐ. ಪರೀಕ್ಷೆ ಬರೆಯುವವರಲ್ಲಿ ಬಹಳಷ್ಟು ಜನ ಓದಿದ್ದನ್ನು ನೆನಪಿನಲ್ಲಿಟ್ಟುಕೊಂಡು ಅದನ್ನೇ ಪರೀಕ್ಷೆಯಲ್ಲಿ ಬರೆಯುತ್ತಾರೆ. ಇದು ಅಷ್ಟೇನೂ ಸೂಕ್ತವಲ್ಲ. ಯಾವುದೇ ರೀತಿಯ ಅಧ್ಯಯನವನ್ನು ನಡೆಸಿದಾಗ ವಿಷಯದ ಥೀಮ್' ಏನು ಎಂಬುದನ್ನು ಅರ್ಥ ಮಾಡಿಕೊಂಡು ಆ ಥೀಮ್^ನ್ನು ಆಧಾರವಾಗಿಟ್ಟುಕೊಂಡು ನಮ್ಮದೇ ಆದ ಸ್ವಂತ ಆಲೋಚನಾ ಕ್ರಮದಲ್ಲಿ ಬರೆಯುವುದೇ ಸೂಕ್ತ. ಈ ರೀತಿ ಬರೆಯುವವರೇ ಪರೀಕ್ಷೆಯಲ್ಲಿ ಗೆಲ್ಲುತ್ತಿದ್ದಾರೆ.

●.ಮಾದರಿ ಪ್ರಬಂಧಗಳನ್ನು ಹೆಚ್ಚು ಹೆಚ್ಚಾಗಿ ಅಧ್ಯಯನ ಮಾಡಿ. ಇವು ನಮ್ಮಲ್ಲಿ ಆಲೋಚನಾ ಕ್ರಮವನ್ನು ಹುಟ್ಟು ಹಾಕಿ ವಿಮರ್ಶಾತ್ಮಕವಾಗಿ ಬರೆಯುವ ಸಾಮರ್ಥ್ಯ ಬೆಳೆಸುತ್ತವೆ. ವಿಮರ್ಶೆ ಎಂಬುದು ವಿರೋಧವಲ್ಲ. ಕೊಟ್ಟಂತಹ ವಿಷಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ವಿಮರ್ಶಿಸಬೇಕು.

●.ಸಿ.ಇ.ಟಿ. ಅಭ್ಯರ್ಥಿಗಳು ಯವುದೇ ಪಕ್ಷ, ವ್ಯಕ್ತಿ ಬಗ್ಗೆ ನಿರ್ಲಕ್ಷ್ಯ, ಉಡಾಫೆ ಅಥವಾ ಪೂರ್ವಗ್ರಹ ಇಟ್ಟುಕೊಳ್ಳಬಾರದು. ಹಾಗೇನಾದರೂ ಇಟ್ಟುಕೊಂಡರೆ, ವಿಮರ್ಶೆಗೆ ವೈಚಾರಿಕ ಸಮರ್ಥನೆ ಇಲ್ಲದಂತಾಗುತ್ತದೆ. ಭಾವನಾತ್ಮಕ ಉದ್ವೇಗದಿಂದ ಪ್ರಬಂಧ ಬರೆಯುವಂತಾಗುತ್ತದೆ.
ಉದಾ: ಟಿಪ್ಪುವಿನ ಸಾಧನೆಗಳು. ಪರ ವಿರೋಧವನ್ನು ಸಮಾನದೃಷ್ಟಿಯಿಂದ ನೋಡಿ ವಿಚಾರ ಕೇಂದ್ರಿತವಾಗಿ ವಿಷಯ ನಿರೂಪಿಸಬೇಕು.

●.ಮಾದರಿ ಪ್ರಬಂಧಗಳನ್ನು ಓದುವಾಗ ಯಾವುದಾದರೂ ಪರಿಕಲ್ಪನೆ ಅರ್ಥವಾಗದಿದ್ದರೆ, ಅದನ್ನು ಬಿಟ್ಟು ಮುಂದಕ್ಕೆ ಹೋಗಬಾರದು, ಅರ್ಥ ಮಾಡಿಕೊಂಡೇ ಮುಂದಕ್ಕೆ ಹೋಗಬೇಕು. ಒಂದು ವೇಳೆ ಆಗದಿದ್ದರೆ, ಅದರ ಹಿಂದಿನ ಮತ್ತು ಮುಂದಿನ ವಿಷಯಗಳ ತನಕ ಓದಬೇಕು.

●.ಅಂಕಿ-ಅಂಶಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಅವು ಸೂಚಿಸುವ ಅರ್ಥ ಏನು ಎಂದು ತಿಳಿದುಕೊಂಡರೆ ಸಾಕು.
ಉದಾ: ಈ ಹಿಂದೆ ಜನಸಂಖ್ಯೆ 100 ಕೋಟಿ ಇತ್ತು. 2011 ರ ಪ್ರಕಾರ 120ಕೋಟಿ ಆಗಿದೆ ಎಂದು ಅರ್ಥೈಸಿಕೊಂಡರೆ ಸಾಕು. ಅದನ್ನು ಬಿಟ್ಟು 120,84,63,700 ಅಂತ ಚಿಂತಿಸುತ್ತಾ ಸಮಯ ಹಾಳುಮಾಡಬಾರದು.

●. ಪ್ರಬಂಧಗಳನ್ನು ಅಧ್ಯಯನ ಮಾಡುವಾಗ ಒಂದು ಪ್ಯಾರಾದಿಂದ ಮತ್ತೊಂದು ಪ್ಯಾರಾಗೆ ಹೇಗೆ ಸಂಬಂಧ ಕಲ್ಪಿಸಲಾಗಿದೆ ಎಂಬುದನ್ನು ಗಮನಿಸಬೇಕು.

●.ಶಾಲಾ-ಕಾಲೇಜುಗಳಲ್ಲಿ ಬರೆದ ಹಾಗೆ ಪ್ರಬಂಧ ಬರೆಯಬಾರದು. ಶಾಲೆಯಲ್ಲಿನ ಪ್ರಬಂಧಗಳು ವಿವರಣಾತ್ಮಕ ರೀತಿಯದ್ದಾಗಿರುತ್ತವೆ. ಆದರೆ ನಾವು ಬರೆಯುವ ಪ್ರಬಂಧಗಳು ವಿಷಯ/ವಿಚಾರದ ಬಗ್ಗೆ ನಮ್ಮ ಧೋರಣೆ ಏನು ಎಂಬುದನ್ನು ನಿರೀಕ್ಷಿಸುತ್ತವೆ. ಆದ್ದರಿಂದ ಪದಗಳು ವಿಮರ್ಶಾತ್ಮಕ ರೀತಿಯಲ್ಲಿ ಇರಬೇಕಾಗುತ್ತದೆ.

●. ವಿಷಯವೊಂದರ ಕುರಿತಾಗಿ ಎಲ್ಲರೂ ಯೋಚಿಸುವಂತೆ ಯೋಚಿಸಿ ಬರೆಯುವುದು ಜಾಣತನವಲ್ಲ. ಬದಲಾಗಿ ವಿಷಯವೊಂದನ್ನು ವಿಭಿನ್ನವಾಗಿ, ಬಹುಮುಖವಾಗಿ ಚಿಂತಿಸಿ ಬರೆಯುವುದು ಸೂಕ್ತ.
ಉದಾ: ಪ್ರತಿಭಾ ಪಲಾಯನ'ದ ಬಗ್ಗೆ ಬರೆಯುವಾಗ ಅದಕ್ಕೆ ಸಮರ್ಥನೀಯ ಕಾರಣಗಳನ್ನು ನೀಡಲು ಪ್ರಯತ್ನಿಸಬೇಕು ಆದರೆ ಸಂಪೂರ್ಣವಾಗಿ ಪೋಷಿಸಿ ಬರೆಯಬಾರದು.
●.ಪ್ರಬಂಧವು ವ್ಯಕ್ತಿನಿಷ್ಠವಾಗಿರಬಾರದು, ವಸ್ತುನಿಷ್ಠವಾಗಿರಬೇಕು.
●. ವಿಶ್ಲೇಷಣೆ ಒಳಗೊಂಡಿರಬೇಕು. ಅಂದರೆ ಒಂದು ವಿಚಾರವನ್ನು ವಿಮರ್ಶಿಸುವಾಗ ಲಭ್ಯವಾಗುವ ಸಣ್ಣಪುಟ್ಟ ವಿವರಗಳನ್ನು ಬಿಡಿಸಿ ಅರ್ಥೈಸಬೇಕು.
●.ವಿಷಯವನ್ನು ಸಂಕುಚಿತ ಮತ್ತು ಸ್ವಾರ್ಥ ಮನೋಭಾವದಿಂದ ಮಂಡಿಸದೇ ವ್ಯಾಪಕ ಪರಿಣಾಮಗಳ ಹಿನ್ನೆಲೆಯಲ್ಲಿ ಮಂಡಿಸಬೇಕು.
●. ಪ್ರಬಂಧದಲ್ಲಿ ಬರೆಯುವ ಪೀಠಿಕೆಯು ಶೀರ್ಷಿಕೆಯ ಹಿನ್ನೆಲೆಯನ್ನು ಬಳಸಿ, ಶೀರ್ಷಿಕೆಯ ಬಗ್ಗೆ ಏನು, ಹೇಗೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವಂತಿರಬೇಕು.
●.ಪ್ರಬಂಧ ನಿರೂಪಿಸುವಾಗ ಕೊಡುವ ಹೇಳಿಕೆಗಳು ವೈಚಾರಿಕ ಸ್ಪಷ್ಟತೆಯಿಂದ ಕೂಡಿರಬೇಕು ಮತ್ತು ಸರಿಯಾದ ಆಧಾರಗಳನ್ನು ಹೊಂದಿರಬೇಕು.
ಉದಾ: ದೇಶದಲ್ಲಿ ವರದಕ್ಷಿಣೆ ಸಮಸ್ಯೆ ಇದೆ ಎಂಬುದು ಎಲ್ಲರ ಅನುಭವಕ್ಕೆ ಬಂದಿರುವಂಥದ್ದು. ಆದರೆ ನಿರ್ದಿಷ್ಟ ವ್ಯಕ್ತಿ/ಸಮುದಾಯದ ಬಗ್ಗೆ ಹೇಳುವಾಗ ಆಧಾರವಿರಲೇಬೇಕು.
●. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಗಾದೆಮಾತು, ನಾಣ್ಣುಡಿ, ಹೇಳಿಕೆಗಳನ್ನು ಬರೆಯುವುದು ಅಷ್ಟೇನೂ ಪರಿಣಾಮಕಾರಿಯಲ್ಲ. ಒಂದು ವೇಳೆ ಬರೆಯಬೇಕಿದ್ದರೆ ಏನಾದರೂ ವಿಶೇಷ ಅರ್ಥ ನಿರೂಪಿಸಬೇಕು. ಸಾಧ್ಯವಾದಷ್ಟು ಗಮನ ಸೆಳೆಯುವ, ವಿಭಿನ್ನ ಹಾಗೂ ಸಾಕಷ್ಟು ಪ್ರಚಾರದಲ್ಲಿ ಇಲ್ಲದ ಗಾದೆ ಮಾತು, ನಾಣ್ಣುಡಿಗಳನ್ನು ಬರೆಯುವುದೊಳಿತು.
●.ಒಂದು ಪ್ಯಾರಾ ಆದ ಮೇಲೆ ಮತ್ತೊಂದು ಪ್ಯಾರಾ ಆರಂಭಿಸುವಾಗ ಅಲ್ಲಲ್ಲಿ ಉಪಶೀರ್ಷಿಕೆಗಳನ್ನು ಬರೆಯಬೇಕು.
●. ಪ್ರಬಂಧದಲ್ಲಿ ಮುಖ್ಯಾಂಶಗಳಿಗೆ ಅಂಡರ್^^ಲೈನ್ ಅಥವಾ ಬೋಲ್ಡ್ ಮಾಡಬಹುದು. ಆದರೆ ಅಂಡರ್^^ಲೈನ್ ಮಾಡಲು ಬೇರೆ ಯಾವುದೇ ಪೆನ್ ಅಥವಾ ಹೈಲೈಟರ್ ಬಳಸಬಾರದು.
●.ಬರವಣಿಗೆ ಸ್ಪಷ್ಟವಾಗಿರಬೇಕು, ಲೇಖನ ಚಿಹ್ನೆಗಳನ್ನು ಬಳಸಬೇಕು.
●. ವಾಕ್ಯರಚನೆ ಉತ್ತಮವಾಗಿರಬೇಕು ಹಾಗೂ ಜೋಡಣೆ ಕ್ರಮವಾಗಿರಬೇಕು.
●.ಪ್ರಬಂಧ ವಿಷಯದ ಎಲ್ಲೆಯನ್ನು ಮೀರಬಾರದು, ಅನಾವಶ್ಯಕವಾಗಿ ಅಪ್ರಸ್ತುತ ವಾಕ್ಯಗಳನ್ನು ಪ್ರಬಂಧಕ್ಕೆ ಎಳೆದು ತರಬಾರದು.
==================

No comments:

Post a Comment